ಗ್ರಾಂಟ್, ಜೇಮ್ಸ್

 	ಸ್ಕಾಟ್ಲೆಂಡಿನ ಒಬ್ಬ ಕಾದಂಬರಿಕಾರ. ತಾಯಿಯ ಕಡೆಯಿಂದ ಮಾಲ್ಟರ್ ಸ್ಕಾಟನಿಗೆ ಸಂಬಂಧಿ. ಹುಟ್ಟಿದ್ದು ಎಡಿನ್‍ಬರದಲ್ಲಿ. ತಂದೆ ಬ್ರಿಟಿಷ್ ಸೈನ್ಯದಲ್ಲಿ ಒಬ್ಬ ಚಾಪ್ಲೆನ್ ಆಗಿದ್ದ. ತಂದೆಯೊಂದಿಗೆ ಈತ 6 ವರ್ಷ ಕಾಲ ನ್ಯೂಫಂಡ್‍ಲೆಂಡಿನಲ್ಲಿದ್ದು 1839 ರಲ್ಲಿ ಸ್ವದೇಶಕ್ಕೆ ಹಿಂತಿರುಗಿದ. ಸೈನ್ಯದಲ್ಲಿ ಬಾವುಟದ ಸಿಪಾಯಿಯಾಗಿ ಸ್ವಲ್ಪ ಕಾಲ ಕೆಲಸ ಮಾಡಿ, ಕೆಲಸಕ್ಕೆ ರಾಜೀನಾಮೆ ಇತ್ತು ಲೇಖನವೃತ್ತಿಯನ್ನು ಅವಲಂಬಿಸಿದ. ಈತ ಸುಮಾರು 50 ಕಾದಂಬರಿಗಳನ್ನು ಬರೆದಿದ್ದಾನೆ. ಅವುಗಳ ಕಥಾವಸ್ತು ಬಹುಮಟ್ಟಿಗೆ ಸೈನಿಕ ಜೀವನವನ್ನು ಕುರಿತದ್ದು. ಅನೇಕ ಕಡೆ ಉಲ್ಲಾಸ ಮತ್ತು ಘಟನೆಗಳ ಶ್ರೀಮಂತಿಕೆಯನ್ನು ಕಾಣಬಹುದು. ಇವನ ಕಾದಂಬರಿಗಳಲ್ಲಿ ಉತ್ತಮಾದವೆಂದರೆ ಅಡ್ವೆಂಚರ್ಸ್ ಆಫ್ ಎನ್ ಏಡ್ - ಡ- ಕಾಙï (1848), ಬಾತ್‍ವೆಲ್ (1854), ಫ್ರಾಂಕ್ ಹಿಲ್ಟನ್ (1855), ದಿ ಯೆಲ್ಲೊ ಫ್ರಿಗೇಟ್ (1855) ಹ್ಯಾರಿ ಆಗಿಲ್ವಿ (1856), ಮೂರು ಸಂಪುಟಗಳ ಓಲ್ಡ್ ಅಂಡ್ ನ್ಯೂ ಎಡಿನ್‍ಬರ, ದಿ ರೋಮನ್ಸ್ ಆಫ್ ವಾರ್ ಇವೂ ಚೆನ್ನಾಗಿವೆ. ಕಿರ್ಕಾಲ್ಡಿ ಆಫ್ ಗ್ರಾಂಜ್ (1849), ಮಾಂಟ್ರೊಸ್ (1858) ಎಂಬವು ಜೀವನಚರಿತ್ರೆಗಳು. ಬ್ರಿಟಿಷ್ ಬ್ಯಾಟಲ್ಸ್ ಆನ್ ಲ್ಯಾಂಡ್ ಅಂಡ್ ಸೀ ಎಂಬುದು ಚಾರಿತ್ರಿಕ ಪ್ರಾಮುಖ್ಯವನ್ನುಳ್ಳ ಕೃತಿ.													(ಎಸ್.ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ